ಬಾಂಗ್ಲಾದೇಶದಲ್ಲಿ ಅಮಾನವೀಯ ಕೃತ್ಯ: ಮಲಗಿದ್ದಾಗಲೇ ಹಿಂದೂ ಯುವಕನಿಗೆ ಬೆಂಕಿ ಹಚ್ಚಿ ಭೀಕರ ಹತ್ಯೆ | Chanchal Bhowmik

ಬಾಂಗ್ಲಾದೇಶದಲ್ಲಿ ಅಮಾನವೀಯ ಕೃತ್ಯ: ಮಲಗಿದ್ದಾಗಲೇ ಹಿಂದೂ ಯುವಕನಿಗೆ ಬೆಂಕಿ ಹಚ್ಚಿ ಭೀಕರ ಹತ್ಯೆ
ಬಾಂಗ್ಲಾದೇಶದಲ್ಲಿ ಅಮಾನವೀಯ ಕೃತ್ಯ: ಮಲಗಿದ್ದಾಗಲೇ ಹಿಂದೂ ಯುವಕನಿಗೆ ಬೆಂಕಿ ಹಚ್ಚಿ ಭೀಕರ ಹತ್ಯೆ
Published on
ಢಾಕಾ: ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಮೇಲಿನ ದಾಳಿಗಳು ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಶುಕ್ರವಾರ ತಡರಾತ್ರಿ ನರಸಿಂಗಡಿಯಲ್ಲಿ 25 ವರ್ಷದ ಹಿಂದೂ ಯುವಕ ಚಂಚಲ್ ಭೌಮಿಕ್(Chanchal Bhowmik) ಎಂಬುವವರನ್ನು ಗ್ಯಾರೇಜ್‌ನಲ್ಲಿ ಮಲಗಿದ್ದಾಗಲೇ ಬೆಂಕಿ ಹಚ್ಚಿ ಜೀವಂತವಾಗಿ ದಹಿಸಿರುವ ದುರಂತ ಘಟನೆ ನಡೆದಿದೆ.

ಘಟನೆಯ ವಿವರ: ನಿದ್ರೆಯಲ್ಲೇ ಅಂತ್ಯವಾದ ಜೀವ

ಚಂಚಲ್ ಭೌಮಿಕ್ ಅವರು ಸ್ಥಳೀಯ ಅಂಗಡಿಯೊಂದಕ್ಕೆ ಸೇರಿದ ಗ್ಯಾರೇಜ್‌ನಲ್ಲಿ ಮಲಗಿದ್ದಾಗ ಹಠಾತ್ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹರಡುತ್ತಿದ್ದಂತೆ ಸ್ಥಳೀಯರು ಮತ್ತು ಅಗ್ನಿಶಾಮಕ ದಳದವರು ಶಟರ್ ಮುರಿದು ಒಳಗೆ ಪ್ರವೇಶಿಸಿದ್ದಾರೆ. ಆದರೆ ಅಷ್ಟರಲ್ಲಾಗಲೇ ವಿಪರೀತ ಜ್ವಾಲೆಗೆ ಸಿಲುಕಿದ್ದ ಚಂಚಲ್ ಅವರ ದೇಹ ಸಂಪೂರ್ಣ ಸುಟ್ಟು ಕರಕಲಾಗಿತ್ತು. ಅಗ್ನಿಶಾಮಕ ದಳದವರು ಅವರ ಶವವನ್ನು ಹೊರತೆಗೆದಿದ್ದಾರೆ.

ಸಿಸಿಟಿವಿಯಲ್ಲಿ ಪತ್ತೆಯಾದ ಸಂಶಯಾಸ್ಪದ ಚಲನವಲನ

ಈ ಘಟನೆಯು ಆಕಸ್ಮಿಕವಲ್ಲ, ಬದಲಾಗಿ ವ್ಯವಸ್ಥಿತ ಸಂಚು ಎಂಬ ಸಂಶಯ ಬಲವಾಗಿದೆ. ಈ ಬಗ್ಗೆ ಮಾತನಾಡಿರುವ ನರಸಿಂಗಡಿ ಪೊಲೀಸ್ ವರಿಷ್ಠಾಧಿಕಾರಿ ಅಬ್ದುಲ್ಲಾ ಅಲ್ ಫಾರೂಕ್, ನಾವು ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಒಬ್ಬ ವ್ಯಕ್ತಿಯ ಸಂಶಯಾಸ್ಪದ ಓಡಾಟ ಕಂಡುಬಂದಿದೆ. ಇದು ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಸಂಭವಿಸಿದ ಅನಾಹುತವೇ ಅಥವಾ ಉದ್ದೇಶಪೂರ್ವಕವಾಗಿ ಹೊರಗಿನಿಂದ ಬೆಂಕಿ ಹಚ್ಚಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.

ಅಲ್ಪಸಂಖ್ಯಾತರಲ್ಲಿ ಹೆಚ್ಚಿದ ಆತಂಕ

ಬಾಂಗ್ಲಾದೇಶದಲ್ಲಿ ಇತ್ತೀಚಿನ ರಾಜಕೀಯ ಬದಲಾವಣೆಗಳ ನಂತರ ಹಿಂದೂಗಳ ಮನೆ, ಅಂಗಡಿ ಮತ್ತು ದೇವಸ್ಥಾನಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಚಂಚಲ್ ಭೌಮಿಕ್ ಅವರ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ಹಿಂದೂ ಸಮುದಾಯದಲ್ಲಿ ಆಕ್ರೋಶ ಮತ್ತು ಭೀತಿ ಮನೆಮಾಡಿದೆ. ತನಿಖೆಯು ನಿಷ್ಪಕ್ಷಪಾತವಾಗಿ ನಡೆದು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂತ್ರಸ್ತ ಕುಟುಂಬ ಆಗ್ರಹಿಸಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net